ಅಭಿವ್ಯಕ್ತಿ – ಒಂದು ಸಾಂಸ್ಕೃತಿಕ ವೇದಿಕೆ

ಅಭಿವ್ಯಕ್ತಿ

ಒಂದು ಸಾಂಸ್ಕೃತಿಕ ವೇದಿಕೆ

1985 ರಲ್ಲಿ ಪ್ರಾರಂಭ. ನಮ್ಮ ‘ಅಭಿವ್ಯಕ್ತಿ’ಗಾಗಿ ನಾವೇ ಕಟ್ಟಿಕೊಂಡ ಒಂದು ಪುಟ್ಟ ವೇದಿಕೆ. ಪುಸ್ತಕ ಪ್ರಕಾಶನದ ನೆಪದಿಂದ ಆರಂಭವಾಗಿ ಸಮಾಜದ ಸ್ವಾಸ್ಥ್ಯಕ್ಕೆ ಪೂರಕ ಅನ್ನಿಸಿದ ಪ್ರಯೋಗಗಳಿಗೆ ವಿಸ್ತರಿಸಿದೆವು. ಹಿರಿಯರನ್ನು ತೋರುಗಂಬ ಮಾಡಿಕೊಂಡು ಗೆಳೆಯರು, ಕಿರಿಯರು ಸೇರಿ ಹಲವಾರು ಕೆಲಸ ಮಾಡುತ್ತಾ ಬಂದಿದ್ದೇವೆ. ಮೂರೂವರೆ ದಶಕಗಳ ಸಂಸ್ಕೃತಿ ಕೆದಕಿದರೆ ಗಿಡ ನೆಟ್ಟಿದ್ದು, ರಕ್ತ ದಾನ ಮಾಡಿಸಿದ್ದು, ಉಚಿತ ವೈದ್ಯಕೀಯ ಶಿಬಿರಗಳು, ನಾಟಕ, ಸಾಹಿತ್ಯ, ಕೃಷಿ ಸಂಬಂಧಿ ಕೆಲಸಗಳು, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಕೃಷಿ ಅಧ್ಯಯನ ಪ್ರವಾಸಗಳು, ವಾಚನಾಭಿರುಚಿ ಹೆಚ್ಚಿಸಲು ಗ್ರಂಥಾಲಯ ಚಳುವಳಿ – ಇಂಥವು ಕಾಣಸಿಗುತ್ತವೆ. ‘ಅಭಿವ್ಯಕ್ತಿ’ ಗ್ರಾಮಮುಖಿ ಅಥವಾ ನಗರಮುಖಿ ಅನ್ನುವುದಕ್ಕಿಂತ ಸಮಾಜ ಮುಖಿ ಅನ್ನಬಹುದು. ಲಾಭಾಕಾಂಕ್ಷೆ ಇಲ್ಲದ, ಎನ್‍ಜಿಓ ಅಲ್ಲದ, ಪಕ್ಷ ರಾಜಕಾರಣದಿಂದ ದೂರ ಉಳಿದ ‘ಅಭಿವ್ಯಕ್ತಿ’, ಪ್ರತಿವರ್ಷ ನಾಗತಿಹಳ್ಳಿ ಸಂಸ್ಕೃತಿ ಹಬ್ಬವನ್ನೂ, ಹಲವಾರು ಕಾರ್ಯಾಗಾರಗಳನ್ನೂ ನಡೆಸಿಕೊಂಡು ಬಂದಿದೆ. ಹತ್ತಾರು ಕೃತಿಗಳನ್ನೂ ಪ್ರಕಟಿಸಿದೆ. ನಾಡಿನ ಎಲ್ಲ ಕ್ಷೇತ್ರದ ಗಣ್ಯರು ನಾಗತಿಹಳ್ಳಿಗೆ ಬಂದು ಚಿಂತನೆಯ ಕಿಡಿ ಹಬ್ಬಿಸಿದ್ದಾರೆ. ನಾಗತಿಹಳ್ಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾವರಣವೇ ನಮ್ಮ ಕಾರ್ಯಕ್ಷೇತ್ರ ; ನಮ್ಮ ವಿಶ್ವವಿದ್ಯಾನಿಲಯ.